Sunday, November 19, 2017

ಬೆಳಕು

ನನ್ನೊಳಗಿನ ನೀನು
ಕತ್ತಲೊಳಗಿನ ಬೆಳಕು

                  --ಕವಿತಾ ಗೋಪಿಕುಂಟೆ

Monday, September 25, 2017

ಸದ್ದು

ನೀರಿಗೆ ಜಿಗಿವಾಗ ಬರುವ ಶಬ್ದ
ನೀರಿಂದ ಮೇಲೇಳುವಾಗ ಬರುವುದಿಲ್ಲ
ತಪ್ಪು ಮಾಡುವಾಗ ಆಡಿಕೊಂಡು ಸದ್ದು ಮಾಡುವ ಜನ
ಒಂದೊಳ್ಳೆ ಕೆಲಸ ಮಾಡುವಾಗ ಮಾತಾಡೋದಿಲ್ಲ
ಇದರಿಂದಲೇ ತಿಳಿಯುತ್ತದೆ
ಸದ್ದಿನಿಂದಿರುವ ಉದ್ದೇಶವೇನೆಂದು

                                      --ಕವಿತಾ ಗೋಪಿಕುಂಟೆ

ಓ ಜೀವವೇ

ಓ ಜೀವವೇ
ಖುಷಿಯೆಂದರೆ ನನಗೆ,

ನನ್ನದಲ್ಲದ ಊರಿನಲಿ
ಜನತುಂಬಿದ ಬೀದಿಯಲಿ
ನಮ್ಮದೇ ಭಾಷೆಯಲಿ
ನಿನ್ನನ್ನು ಕೂಗುವುದು

ತುಂತುರು ಮಳೆಯಲಿ
ಬಿಳಿಮರಳ ಬೀಚಿನಲಿ
ನಿನ್ನೆಜ್ಜೆ ಮೇಲೆ
ನನ್ನೆಜ್ಜೆ ಇಡುವುದು

ಬಿದಿರ ಕಾಡಿನಲಿ
ಬೀಸೋ ಗಾಳಿಯಲಿ
ನಿನ್ನನ್ನೆ ಬೆನ್ನಟ್ಟಿ
ಓಡೋಡಿ ಬರುವುದು

ಅವರ ದೇವಾಲಯದಲ್ಲಿ
ಅಲ್ಲಿನ ಸಂಪ್ರದಾಯದಲಿ
ಅವರದೇ ಭಾಷೆಯಲಿ
ನಿನಗಾಗಿ ಬೇಡುವುದು

ಇಷ್ಟೆಲ್ಲಾ ಗಳಿಗೆಗಳ
ಬಚ್ಚಿಟ್ಟು ಕಾಯುತಿರುವೆ
ಬಂದುಬಿಡು ಬಹುಬೇಗ
ನಾನಿರುವ ಊರಿಗೆ

                     --ಕವಿತಾ ಗೋಪಿಕುಂಟೆ

ದಾರ

ಸೂಜಿ ನಾವಾಗಿ
ದಾರ ಬಾಳದಾರಿಯಾದಾಗ
ದಾರಕಾಕುವ ಗಂಟೇ ತವರು

ದಾರದ ಬುಡದಿ ಗಂಟಿಲದಿರೆ
ಹೊಲಿಗೆ ಸಾಧ್ಯವಿಲ್ಲ
ತವರ ಮರೆತ
ಯಾರ ಬಾಳಿಗೂ ಅರ್ಥವಿಲ್ಲ

            --ಕವಿತಾ ಗೋಪಿಕುಂಟೆ

Tuesday, June 20, 2017

ಸಾವ ಕೆಸರು

ನಿನ್ನ ನೆರಳಿಡಿದು
ಹಿಂಬಾಲಿಸಿರುವೆ
ಮಾತಾಡದ
ಕಾಲ್ಗೆಜ್ಜೆ ಜೊತೆ
ಮಾತಾಡುವ ಪರಿಗೆ
ಹೊಳಪಿಲ್ಲದ
ಮೂಗುತಿ ಬೆಳಕಲ್ಲಿ
ದಾರಿ ಹುಡುಕುವ ದಾಟಿಗೆ
ಮನಸಾರೆ ಮನಸೋತು
ಸಾವ ಕೆಸರಲೂ
ಕನಸ ಕಮಲವ ಬಿತ್ತಿ
ಪ್ರೀತಿ ಮೊಗೆಯಲು
ಹಿಂಬಾಲಿಸಿರುವೆ

                       --ಕವಿತಾ ಗೋಪಿಕುಂಟೆ 

ಭಾವಬಣ್ಣ

ಕಳ್ಳ ನೋಟದ
ಬಾಣನಾಟಿ
ಕೆನ್ನೆಗುಳಿಯಲಿ
ಮೊಡವೆ ಮೂಡಿ
ನಿನ್ನ ಭಾವಬಣ್ಣ
ನನ್ನ ಮೊಗದ
ರಂಗೇರಿಸಿದೆ

                  --ಕವಿತಾ ಗೋಪಿಕುಂಟೆ 

ತುಂತುರು

ಇನಿಯ ಜೊತೆಗಿರಲು
ತುಂತುರು ಮಳೆಬರಲು
ಇನ್ನೇನು ಬೇಕು
ಮನ ತಣಿಯಲು

                     --ಕವಿತಾ ಗೋಪಿಕುಂಟೆ 

ಕದನ

ನನ್ನೊಳಗಿನ
ಮೌನ ಕದಲಿಕೆಗೆ
ನಿನ್ನೊಳಗಿನ
ಪ್ರೀತಿ ಕದನ

                  --ಕವಿತಾ ಗೋಪಿಕುಂಟೆ 

ಓಡಿ ಬರುವಾಗ

ನೀ ಓಡಿ ಬರುವಾಗ
ಹಲುಬಿದ ಕಣ್ಣಲ್ಲಿ
ಪನ್ನೀರ ಪೊರೆತ

ನಗು ಕಂಡಾಗ
ಮನದಲ್ಲೇನೋ
ಪುಳಕ

ಮೌನವರಿಸಿದಾಗ
ಜೀವಹಿಂಡಿದ
ಕಂಪನ

ಕೈಹಿಡಿದು ನಡೆವಾಗ
ತಂಗಾಳಿಯಲಿ
ಜೀಕುವುದು ಮನ

                         --ಕವಿತಾ ಗೋಪಿಕುಂಟೆ 

ಹಚ್ಚೆ

ಹಚ್ಚೆಯಂತೆ
ಹಚ್ಚಾಗಿಬಿಡು
ಹೃದಯದಲಿ
ಸರಿತಪ್ಪುಗಳ
ಭ್ರಮೆಯ ಸರಿಸಿ

                   --ಕವಿತಾ ಗೋಪಿಕುಂಟೆ 

Thursday, June 8, 2017

ಪೋಣಿಸು

ನಿನಗಾಗಿ ಕೂಡಿಟ್ಟ
ಮಾತುಗಳ
ಬೆಚ್ಚಗೆ ಬಚ್ಚಿಟ್ಟಿರುವೆ
ಕವಿತೆಯಲ್ಲಿ
ಪೋಣಿಸು ಬಾ
ಪ್ರೀತಿ ಎಳೆಯಲಿ

               --ಕವಿತಾ ಗೋಪಿಕುಂಟೆ 

ನಿನ್ನೊಂದಿಗೆ

ನಿನ್ನೊಂದಿಗಾಕೋ
ಪ್ರತಿಹೆಜ್ಜೆಯ ಜೊತೆ
ಎದೆಬಡಿತ
ಏರಿಳಿದಿದೆ
ಉಗುರು ಬಣ್ಣವು
ಮಿನುಗಿ ಮೂದಲಿಸಿದೆ
ಮದರಂಗಿ ನಾಚಿ
ತುಸು ಹೆಚ್ಚೇ ಕೆಂಪಾಗಿದೆ

                           --ಕವಿತಾ ಗೋಪಿಕುಂಟೆ 

Tuesday, May 30, 2017

ನವಕಾವ್ಯ

ನೆನಪುಗಳ ಹಾವಳಿಗೆ
ಕನಸುಗಳ ಪ್ರತಿದಾಳಿ
ಮುಗಿಲಿಗೂ ಮಿಗಿಲಾಗಿ
ನವಕಾವ್ಯ ಬರೆದಿದೆ ತಂಗಾಳಿ

                                --ಕವಿತಾ ಗೋಪಿಕುಂಟೆ 

ಕಿರುಮನ

ಕಿರುಬೆರಳಿಡಿದು
ಕಿರುನಗೆ ಸೂಸಿ
ಕಿರುನೋಟದಿ
ನಿನ್ನ ಕಂಡು
ಸಂಭ್ರಮಿಸುತಿದೆ
ಕಿರಿದಾದ ಈ ಮನ

                       --ಕವಿತಾ ಗೋಪಿಕುಂಟೆ

Monday, May 22, 2017

ಪುಟಿವ ಮನ

ಸೆಳೆತ ತೀರದ
ತೀರ ಯಾನ
ಕಾಲಷ್ಟೇ ಚಲಿಸುತಿದೆ
ಮನವು ಮೌನ
ಕಿವಿಯಲ್ಲೋ  ಕಳೆದಿದೆ
ಒಳಗಣ್ಣು ಮುಚ್ಚಿದೆ
ಸಾಗಿದೆ ನಡಿಗೆ
ದೂರ ದೂರ
ಹೆಜ್ಜೆಗುರುತ ನುಂಗುತಿದೆ
ಸುಪ್ತ ಮನ
ತಿರುಗಿ ಉಳಿಸಲೆಂದೇ
ಪುಟಿವ ಮನ

                           --ಕವಿತಾ ಗೋಪಿಕುಂಟೆ 

Tuesday, May 16, 2017

ಮನದ ಧ್ಯಾನ

ಪ್ರೀತಿ ದ್ವೇಷವ
ಕಂಡ ಮನ
ಮಾತು ಬಿಟ್ಟಿದೆ

ಶಾಂತಕೊಳಕೆ
ಕಲ್ಲೆಸೆಯುತಾ
ಧ್ಯಾನಿಸುತ್ತಿದೆ

ಅಲೆಗಳ
ರಿಂಗಣಕೆ
ಕಂಪಿಸುತ್ತಿದೆ

                  --ಕವಿತಾ ಗೋಪಿಕುಂಟೆ 

ಸೋಜಿಗ

ಬಂದು ಬಳಿ ನಿಲ್ಲದೆ
ಮಂಡಿಯೂರಿ ಕೇಳದೆ
ಸೆಳೆತದೆಳೆಯ
ಬೀಸಿ ಸೆಳೆದು

ಅಪರಾಧವಿಲ್ಲದೆ
ಆಪಾದಿಸಿ
ಅಪಾರವಾಗಿ
ಕಾಡಿ ಸೆಳೆದು

ಸೂಚನೆಯೇ ಇಲ್ಲದೆ
ಸೋಜಿಗದಂತೆ ಸೆಳೆದು
ಕದ್ದೊಯ್ದನಲ್ಲ ಮನವ
ಕಾಣದೆನ್ನ ಕೃಷ್ಣನು

                          --ಕವಿತಾ ಗೋಪಿಕುಂಟೆ 

Thursday, May 11, 2017

ಪ್ರೀತಿ ಸುಳಿ

ಗುಂಗುರು ಕೂದಲ
ಕಡುಕಪ್ಪಿಗಿಂತ
ಕಟುವಾಗಿ ಕಾಡುತಿದೆ
ನೀಲ ಬಣ್ಣ

ಕೊಳಲ ನಾದದ
ಗುನುಗು
ಪ್ರೀತಿ ಸುಳಿಯಲಿ
ಸುಳಿಸಿ

ಹಿಂಡುತಿದೆ ಜೀವ
ತೆರೆವ ಮುನ್ನವೆ
ಮನದ ಭಾವ

                --ಕವಿತಾ ಗೋಪಿಕುಂಟೆ 

Wednesday, April 12, 2017

ಕೊಳಲ ಮೌನ

ನಿನ್ನ
ಮೌನವ
ಸಹಿಸುವೆ
ಕೊಳಲ
ಮೌನವ
ಸಹಿಸೆನು

                   --ಕವಿತಾ ಗೋಪಿಕುಂಟೆ 

Tuesday, April 4, 2017

ನೀನಾ

ನೀ
ಮುಗಿಲಮೌನ
ನಾ
ಧರೆಯದನಿ

                  --ಕವಿತಾ ಗೋಪಿಕುಂಟೆ 

Thursday, March 30, 2017

ಬರದ ಸಂಭ್ರಮ

ಸುಡುಬಿಸಿಲಿಗೆ
ಒಣಗಿದೊಲ
ಯುಗಾದಿ ಸಂಭ್ರಮದ
ಜೊತೆ ಮಾತಾಡುತ್ತಿತ್ತು

ಹರೆ ಹೊಟ್ಟೆಗೆ
ತಿಂದ ಕರು
ಅಪ್ಪ ಕಟ್ಟುತ್ತಿದ್ದ
ತೋರಣವ ನೋಡುತ್ತಿತ್ತು

ಕರುಕಂಡ ಹಸು
ಹಾಕಿದ ಗುಟುರು
ಉಯ್ಯಾಲೆಯಲ್ಲಿದ್ದ
ನನ್ನ ಸೆಳೆದಿತ್ತು

ಹಜಾರದಿ ಕೂತಿದ್ದ
ಅಜ್ಜನ ಬಿಸಿಯುಸಿರು
ಹಣೆಮೇಲಿನ ಶೆಖೆನೀರ
ಹಿಂಗಿಸಿಯೆಬಿಟ್ಟಿತ್ತು

                      --ಕವಿತಾ ಗೋಪಿಕುಂಟೆ

Monday, March 27, 2017

ಹನುಮನುಸಿರು

ಯಾರೋ ಕೊಟ್ಟ ದೇಹಕೆ
ನೀ ಕೊಟ್ಟೆ ಜೀವದ ಉಸಿರು
ನಾ ನಡೆವ ದಾರಿಗೆ
ನೀ ತೊಟ್ಟೆ ಗೆಲುವ ಹಸಿರು
ಯಾವುದೂ ನನ್ನದಲ್ಲ
ನನಗೇನೂ ಬೇಕಿಲ್ಲ
ನೀ ಕೊಟ್ಟ ಈ ಉಸಿರ
ನೀನೇ ತೆಗೆದುಕೋ
ಪವನಸುತನಲ್ಲಿ
ಪಾವನಿಯಾಗುವ
ಭಾಗ್ಯವನ್ನಷ್ಟೇ ಕರುಣಿಸು

--ಕವಿತಾ ಗೋಪಿಕುಂಟೆ 

Tuesday, March 21, 2017

ಗರಿಕೆ

ಕಾಲಲ್ಲಿ ವಸಕಿ
ಕೈಯಲ್ಲಿ ಕಿತ್ತು
ಬುಡ ಅಗೆದು
ಸುಟ್ಟರೂ
ಮತ್ತುಟ್ಟಿ ಬರುವ
ಗರಿಕೆಯಾಗಬೇಕು
ಛಲ ಬಿಡದೆ
ಅಂಟಿ ತನ್ನತನವ
ನಿರೂಪಿಸಲುಬೇಕು

                 --ಕವಿತಾ ಗೋಪಿಕುಂಟೆ 

ಬದಲಾವಣೆ

ಬದಲಾವಣೆಗೆಂದು ಎಲ್ಲಿಹೋದರೂ
ಅದುವೇ ಕುಟ್ಟುವ ಕೆಲಸ
ಸುತ್ತಾ ಇರುವ ಮುಖಗಳಷ್ಟೇ ಬೇರೆ
ತೋರುವ ಗುಣಗಳು ಒಂದೇ

                              --ಕವಿತಾ ಗೋಪಿಕುಂಟೆ 

Wednesday, February 22, 2017

ಬೇಯುವ ಗತ್ತು

ಬೆಂದವರಿಗೆ ಗೊತ್ತು
ಬೇಯುವ ಗತ್ತು
ನೀರಗುದಿಯ ತಾಳಕೆ
ಕುಣಿಯುವ ಗಮ್ಮತ್ತು

                 --ಕವಿತಾ ಗೋಪಿಕುಂಟೆ 

Thursday, February 9, 2017

ಕಾಫಿ

ನಲ್ಲ ನೆನಪಾದಾಗಲೆಲ್ಲಾ
ನಗು ಸೆಳೆವಂತೆ
ಕಪ್ಪು ಕಂಡಾಗಲೆಲ್ಲಾ
ಕಾಫಿ ಕರೆಯುತಿದೆ

                       --ಕವಿತಾ ಗೋಪಿಕುಂಟೆ 

ಬದುಕು

ಬದುಕು ಬವಣೆ
ಭಾವನೆ ಸಾಧನೆ
ನಿರಂತರ
ಈ ಜಗದೊಳಗೆ

                 --ಕವಿತಾ ಗೋಪಿಕುಂಟೆ 

Monday, January 16, 2017

ಭಾವಾಂತರಂಗ

ನಾನೆಂಬ ನನ್ನೊಳಗೆ
ನೀನಾಗಿ ಬಂದು
ನಾವೆಂಬ ಭಾವತಂದ
ಭಾವಾಂತರಂಗ
ಅನುಕ್ಷಣವು ನಿನಗಾಗಿ
ಚಡಪಡಿಸುವುದು
ನನ್ನಾಂತರಂಗ  

                       --ಕವಿತಾಗೋಪಿಕುಂಟೆ 

Tuesday, January 10, 2017

ಸಿಲ್ಕ್ ಬೋರ್ಡ್ - ಬಿಟಿಎಂ

ಬಿಸಿಲ ಬೇಗೆಯ
ರುಚಿನೋಡದವನನ್ನ
ಸಂಜೆ ಎಂಟರ ಸಿಲ್ಕ್ಬೋರ್ಡ್
ಸಿಗ್ನಲ್ನ ಟ್ರಾಫಿಕ್ಕಲ್ಲಿ ನಿಲ್ಲಿಸಿ
ಮನೆಯೂಟ ಜರಿವವನ
ಬಿಟಿಎಂನಲ್ಲಿರೋ ಪಿಜಿಗೆ
ಸೇರಿಸೆಂತು ಕವಿಯಾತ್ಮ    

                             --ಕವಿತಾ ಗೋಪಿಕುಂಟೆ 

ಮನಮೋಹಕ

ಮೋಹನನ ಮನೋಹರ
ಗೀತಿಕೆಗೆ ಮನಸೋತ ರಾಧೆ
ಮನಮೋಹಕ ನೋಟಕ್ಕೆ
ಸೆರೆಸಿಕ್ಕಿ ಕೊನೆವರೆಗು
ಅವನು ಪ್ರೇಮಿಯಾದಳು

                           --ಕವಿತಾ ಗೋಪಿಕುಂಟೆ 

Thursday, January 5, 2017

ಪ್ರೀತಿ ಪರಿಮಳ

ಕೃಷ್ಣನ ಕೊಳಲ
ಗಂಧ ನಾದದಿ
ರಾಧೆಯ ಕಾಲ್ಗೆಜ್ಜೆ
ಸದ್ದಿನ ಘಮ ಬೆರೆತು
ಜಗದ ತುಂಬೆಲ್ಲಾ
ಹರಡಿದೆ ಪ್ರೀತಿ ಪರಿಮಳ
ಪ್ರೇಮಿಗಳಲ್ಲಿ ತಂದಿದೆ
ಸಿಹಿನೋವ ತಳಮಳ

                       --ಕವಿತಾ ಗೋಪಿಕುಂಟೆ