Thursday, December 8, 2016

ತ್ಯಾಗಮಯಿ


ನನ್ನಸಿದೊಟ್ಟೆಯ ಕೂಗು
ಅವ್ವನ ಕಾಲ್ಗೆಜ್ಜೆ ಸದ್ದು
ಬಿಕ್ಕಳಿಕೆಯೆ ಅವಳ
ಕೈಬಳೆ ನಾದ

ಒಲೆಕಿಡಿ ಕಾರಿದ ಕುಪ್ಪಸದ ಚುಕ್ಕಿ
ಚಂದಮ್ಮನ ಮೇಲಕಲೆ
ನೊಂದರಿದ ಸೀರೆ
ತೆಂಗಿನ ಚಪ್ಪರ

ಗಂಜಿಯ ಕುಡಿದು ಜೊಲ್ಲನು ಸುರಿಸಿ
ತೀಡಿದೆನು ಕುಪ್ಪಸಕೆ
ಮಳೆಗು ಬಿಸಿಲಿಗು ಗುಮ್ಮವ ಕಂಡು
ಅಡಗಿದೆನು ಸೆರಗಿನಲಿ

ಗೊಣ್ಣೆಗೆ ರಟ್ಟಾದ ಕುಪ್ಪಸವನೆ ತೊಟ್ಟು
ಉಚ್ಚೆಯಲಿ ತೊಯ್ದ ಸೀರೆಯ ಉಟ್ಟು
ಎಲ್ಲವ ಸಹಿಸಿ  ಎಲ್ಲವ ತೊರೆದು
ಜೀವಕ್ಕಾಗಿ ಜೀವವನೇ ತೇಯ್ದಳು

ಜಗವನು ಗೆದ್ದ ಕೀರ್ತಿಯನೆಲ್ಲ
ಅವಳ ಮೂಗುತಿಯಲ್ಲೇ ಇರಿಸುವೆನು
ಜಗದೆಲ್ಲ ಸುಖವನು ತಂದು
ಅವಳ ಕಾಲ್ಕೆಳಗೆ ಇರಿಸುವೆನು

                                  --ಕವಿತಾ ಗೋಪಿಕುಂಟೆ

No comments:

Post a Comment

Note: Only a member of this blog may post a comment.