Tuesday, May 13, 2014

ಬದುಕು ಗಡಿಯಾರ


ಬದುಕೆಂಬ ಗಡಿಯಾರ 
ಎಷ್ಟೊಂದು ಚಿಕ್ಕದು 

ಟಿಕ್ ಟಿಕ್ ಎಂದುರುಳುತಿವೆ ದಿನಗಳು 
ಸರಸರನೆ ಸರಿಯುತಿವೆ ಸಂವತ್ಸರಗಳು 

ಏಳು ಬೀಳಿನ ಆಟವಿದೆ ಪ್ರತಿ ಘಳಿಗೆ 
ಎಲ್ಲವ ನಿಯಂತ್ರಿಸುತಿದೆ ಗುಂಡಿಗೆ ಬ್ಯಾಟರಿ

ಒಮ್ಮೆ ನಿಂತರೆ ಈ ಗುಂಡಿಗೆ ಬ್ಯಾಟರಿ 
ಬದುಕಿಗೊಂದು ವಿದಾಯ ಖಾತರಿ
                 
                                                        -ಕವಿತಾ ಗೋಪಿಕುಂಟೆ 


Thursday, March 13, 2014

ಆತ್ಮದ ಸೆಳೆತ


ನನ್ನ ಆತ್ಮದ ಜೊತೆಗಾರ 
ನವನೀತಚೋರನ  ಶ್ವಾಸ 
ಕೊಳಲ ನಾದದಿ ಬೆರೆತು 
ನನ್ನನ್ನೇ ಹುಡುಕಿ ಬಂದು 
ಸೂಸುತಿದೆ ಘಮವ 
ಹೋದಲ್ಲಿ ಬಂದಲ್ಲಿ 

ರಮಿಸುತಿದೆ ನನ್ನ 
ಮನ ಪುಟಿದಾಗ 
ಹೊರಳಿಸುತಿದೆ ಕಣ್ಣಿಂದ 
ತಿಳಿನೀರ ಮುತ್ತೊಂದ 
ನಾ ಭಾವುಕಳಾದಾಗ 
ಬಿಚ್ಚಿಡುತಿದೆ ನೆನಪ ಬುತ್ತಿಯ 
ನಾ ಏಕಾಂತದಿ ಲೀನಳಾದಾಗ 

ಸೆಳೆಯುತಿದೆ ನನ್ನಾತ್ಮವ 
ಅವನಾತ್ಮದೆಡೆಗೆ 
ನನ್ನನ್ನೇ ಸೆಳೆಯುತಿದೆ 
ಅವನೆಡೆಗೆ 

                                                        ಇಂತಿ,
                                                        ಕವಿತಾ ಗೋಪಿಕುಂಟೆ 

Thursday, February 13, 2014

ಕನಸು ಮತ್ತು ಆಸೆ

ಸಾವಿರಾರು ಕನಸುಗಳು ಸಾಲುಗಟ್ಟಿ ನಿಂತಿರುವಾಗ
ಆಸೆಗಳೆಲ್ಲವೂ  ಕನಸುಗಳನು ಹಿಂಬಾಲಿಸುತಿರುವಾಗ 
ನಾ ಕಂಡ ಕನಸುಗಳೆಲ್ಲವ
ಒಂದೇ ದಿನದಲಿ  ಹೇಳಿಬಿಡೆಂದರೆ ಹೇಗೆ..?
ನನ್ನೆಲ್ಲಾ ಆಸೆಗಳ
ಒಂದೇ ಉಸಿರಲಿ ಹೇಳಿಬಿಡೆಂದರೆ ಹೇಗೆ..?

ಎಲ್ಲಾ ಕನಸುಗಳಿಗೆ  ರೆಕ್ಕೆ ಪುಕ್ಕ ನೀಡಲಾಗದಿರುವಾಗ
ಎಲ್ಲಾ ಆಸೆಗಳಿಗೆ ಜೀವ ತುಂಬಲಾಗದಿರುವಾಗ
ಪದಗಳೆ ನಿಲುಕದ ಕನಸುಗಳಿರುವಾಗ
ಭಾಷೆಯೇ ಅರಿಯದ ಆಸೆಗಳಿರುವಾಗ
ಎಲ್ಲವನ್ನು ಹೇಳಿಬಿಡೆಂದರೆ ಹೇಗೆ..?

ಪ್ರತಿದಿನವು ಹೊಸ ಕನಸುಗಳು ಜನಿಸುವಾಗ
ಪ್ರತಿಕ್ಷಣವು ಹೊಸ ಆಸೆಗಳು ಮೂಡುವಾಗ
ಎಲ್ಲಾ ಹೇಳಿ ಮುಗಿಸಿಬಿಡೆಂದರೆ ಹೇಗೆ..?

                                                                         ಇಂತಿ,
                                                                         ಕವಿತಾ ಗೋಪಿಕುಂಟೆ